ಸಿಂದಗಿ: ಸಹಕಾರಿ ಸಂಘಗಳು ರೈತರಿಂದಲೇ ನಡೆಯುವಂತಾಗಬೇಕು. ದ್ರಾಕ್ಷಿ, ದಾಳಿಂಬೆ, ಪಪ್ಪಾಯಿ ಕೃಷಿಯನ್ನು ಆಧುನಿಕ ಸುಧಾರಿತ ಪದ್ಧತಿಯಿಂದ ಬೆಳೆದು ಆರ್ಥಿಕತೆಯಿಂದ ಸಬಲರಾಗಿ ಸಂಘಗಳಿಗೆ ತಾವೇ ಸಾಲ ನೀಡುವಂತಾಗಬೇಕು ಎಂದು ವ್ಹಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಕಟ್ಟಡ ಉದ್ಘಾಟಿಸಿ ಹೇಳಿದರು.
ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ ಅವರು, ಆರ್ಥಿಕ ಅಡಚಣೆಯಾದಾಗ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ಅನ್ನದಾತನ ಸಂಕಷ್ಟ ನೀಗಿಸಿ, ರೈತನ ಬೆನ್ನೆಲುಬಾಗಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತವೆ. ಜಿಲ್ಲೆಯಲ್ಲಿ ಒಟ್ಟು 272 ಸಹಕಾರಿ ಸಂಘಗಳಿದ್ದು, ಅನೇಕ ಸಂಘಗಳು ಉತ್ತಮ ನಿರ್ವಹಣೆ ತಿಕೋಟ, ಹೊರ್ತಿ ಸಂಘಗಳು ಉತ್ಪನ್ನದಾಯಕತೆಯನ್ನು ಹೊಂದಿದ್ದು, ಉಳಿದ ಸಹಕಾರಿ ಸಂಘಗಳು ಕೂಡ ಲಾಭದಾಯಕವಾಗಿಸಿ, ಅಧಿಕಾರಿ ಮತ್ತು ಸಿಬ್ಬಂದಿಯವರು ಸಮನ್ವಯತೆಯಿಂದ ಸಹಕರಿಸಬೇಕು ಎಂದರು.
ಶಾಸಕ ರಮೇಶ ಭೂಸನೂರ ಮಾತನಾಡಿ, ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಇಂತಹ ಸಹಕಾರಿ ಸಂಘಗಳ ಉಪಯೋಗ ತೆಗೆದುಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಅಗಲಿದ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವೇ.ಈರಯ್ಯ ಹಿರೇಮಠ ವಹಿಸಿದ್ದರು. ವ್ಹಿಡಿಸಿಸಿ ನಿರ್ದೇಶಕ ಎಚ್.ಆರ್.ಪಾಟೀಲ, ಸಹಕಾರಿ ಸಂಘದ ಉಪನಿಬಂಧಕ ಸಿ.ಎಸ್.ನಿಂಬಾಳ, ಆರ್.ಎಂ.ಬಣಗಾರ, ಭಾಗ್ಯಶ್ರೀ ಎಸ್.ಕೆ., ಪಿಕೆಪಿಎಸ್ ಅಧ್ಯಕ್ಷ ಶರಣಪ್ಪ ಬಾದನ, ಸಿಇಒ ವೀರನಗೌಡ ಪಾಟೀಲ ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.
ಜಿ.ಜಿ.ಹಿರೇಮಠ ನಿರೂಪಿಸಿದರು. ಡಾ.ಪ್ರಭು ಬಿರಾದಾರ ಸ್ವಾಗತಿಸಿದರು. ಬಿ.ಕೆ.ಐರೋಡಗಿ ವಂದಿಸಿದರು.
Leave a Reply