ಬೆಂಗಳೂರು :
*ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ತಜ್ಞರಿಂದ ವಿಚಾರ ಸಂಕೀರ್ಣ ಆಯೋಜನೆ
*ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಯೋಜನೆ ಸದುಪಯೋಗಕ್ಕೆ ಕರೆ
ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ರೈತರನ್ನು ಕಾಡುತ್ತಿರುವ ಸವಳು -ಜವಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಹೇಳಿದ್ದಾರೆ.
ಬೆಂಗಳೂರಿನ ಜಿಕೆವಿಕೆಯಲ್ಲಿ ಗುರುವಾರ ಎಫ್‌ಐಸಿಸಿಐ ಆಯೋಜಿಸಿದ್ದ ‘ಅಗ್ರಿ ಮ್ಯಾಕ್ 2022’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಸವಳು-ಜವಳು ಸಮಸ್ಯೆಯಿಂದ ವರ್ಷದಿಂದ ವರ್ಷಕ್ಕೆ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಕ್ಯಾನ್ಸರ್‌ನಂತೆ ರೈತರನ್ನು ಎಡೆಬಿಡದೇ ಕಾಡುತ್ತಿರುವ ಈ ವಿಚಾರವಾಗಿ ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ,” ಎಂದು ತಿಳಿಸಿದರು.
” ಸವಳು ಜವಳು ಕುರಿತು ವಿಶೇಷ ಅಧ್ಯಯನ ನಡೆಸಿರುವ ತಜ್ಞರೊಂದಿಗೆ ಕಳೆದ ತಿಂಗಳು ಬಿಳಗಿಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈತರಿಗೆ ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲ್ಲಿದ್ದಾರೆ,”ಎಂದು ಅವರು ಹೇಳಿದರು.
“ಪ್ರತಿ ವರ್ಷ ನೀರಾವರಿ ಪ್ರದೇಶ ಹೆಚ್ಚುತ್ತಿರುವಂತೆ ಸವಳು-ಜವಳು ಸಮಸ್ಯೆಯ ತೀವ್ರತೆಯೂ ಹೆಚ್ಚುತ್ತಿದೆ. ಪರಿಣಾಮವಾಗಿ, ಫಲವತ್ತಾದ ಭೂಮಿ ಇದ್ದರೂ ಅದರಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ,” ಎಂದು ಸಚಿವರು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ,ಕೃಷಿ ವಿವಿ ಜಿಕೆವಿಕೆಯ ಉಪ ಕುಲಪತಿ ಎಸ್. ರಾಜೇಂದ್ರ ಪ್ರಸಾದ್, ಫೆಡರ್ ಯುನಾಕೋಮಾದ ಅಧ್ಯಕ್ಷರಾದ ಶ್ರೀ ಅಲೆಸ್ಸಾಂಡ್ರೊ ಮಲವೋಲ್ಟಿ, ಎಫ್‍ಐಸಿಸಿಐ ಅಧ್ಯಕ್ಷ ಉಲ್ಲಾಸ ಕಾಮತ್, ಎಫ್‍ಐಸಿಸಿಐ ಕೃಷಿ ಸಮಿತಿ ಅಧ್ಯಕ್ಷ ಟಿ.ಆರ್.ಕೇಶವನ್, ಎಫ್‍ಐಸಿಸಿಐ ಕೃಷಿ ಉಪಸಮಿತಿಯ ಅಧ್ಯಕ್ಷ ರವೀಂದ್ರ ಅಗರ್ವಾಲ್ ಹಾಗೂ ಹಲವರು ಉಪಸ್ಥಿತರಿದ್ದರು.
ಎಥನಾಲ್ ಉತ್ಪಾದನೆಯಲ್ಲಿ ನಾವೇ ಮೊದಲು
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ವಿವರಿಸಿದ ಸಚಿವರು, “ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ಎಥನಾಲ್ ಉತ್ಪಾದನೆ ಹೆಚ್ಚಳ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ವಿಶೇಷ ಒಲವು ತೋರಿದ್ದು ಇನ್ನೊಂದು ವರ್ಷದಲ್ಲಿ ಕರ್ನಾಟಕ ದೇಶದಲ್ಲೇ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ,” ಎಂದು ಸಚಿವ ನಿರಾಣಿ ವಿವರಿಸಿದರು.
“ಕೇಂದ್ರ ಸರ್ಕಾರವು ಪೆಟ್ರೋಲ್, ಡಿಸೇಲ್‍ನೊಂದಿಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡಲು ಕರೆ ಕೊಟ್ಟಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ, ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 5,850 ಕೋಟಿ ರೂಪಾಯಿ ಹೂಡಿಕೆ ಆಗಿದೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದಾಗಲಿದೆ,” ಎಂದರು.
Leave a Reply